ತಾಮಸ್, ಫ್ರೆಡರಿಕ್ ವಿಲಿಯಂ		
 	1867-1956. ಆಂಗ್ಲ ಪ್ರಾಚ್ಯ ವಿದ್ವಾಂಸ, ಹುಟ್ಟಿದ್ದು ಬರ್ಮಿಂಗ್ ಹ್ಯಾಂನಲ್ಲಿ. ಬಾಲ್ಯ ಶಿಕ್ಷಣವನ್ನು ಅದೇ ಊರಿನ ಕಿಂಗ್ ಎಡ್ವರ್ಡ್ ಶಾಲೆಯಲ್ಲಿ ಮುಗಿಸಿ 1889 ಕೇಂಬ್ರಿಜ್ ವಿಶ್ವವಿದ್ಯಾಲಯವನ್ನು ಸೇರಿದ. ಅಲ್ಲಿ ಗ್ರೀಕ್, ಲ್ಯಾಟಿನ್, ಸಂಸ್ಕøತಗಳನ್ನು ಆರಿಸಿಕೊಂಡು ಆನರ್ಸ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ. ಅನಂತರ ಸ್ನಾತಕೋತ್ತರ ಶಿಕ್ಷಣದ ವಿದ್ಯಾಥಿವೇತನ ಪಡೆದು 1893ರಲ್ಲಿ ಎಂ.ಎ. ಪದವೀಧರನಾದ. 

	ವಿದ್ಯಾರ್ಥಿ ದೆಶೆಯಲ್ಲೇ ಈತನಿಗೆ ಭಾರತೀಯ ಸಾಹಿತ್ಯ, ಸಂಸ್ಕøತಿಯತ್ತ ವಿಶೇಷ ಒಲವಿತ್ತು. ಎಂ. ಎ. ವಿದ್ಯಾರ್ಥಿಯಾಗಿರುವಾಗ ಬ್ರಿಟಿಷ್ ಎಜುಕೇಷನ್ ಇನ್ ಇಂಡಿಯ ಮತ್ತು ದಿ ಮ್ಯೂಚ್ಯುಯಲ್ ಇನ್ ಫ್ಲೂಯೆನ್ಸ್ ಆಫ್ ಮಹಮಡನ್ಸ್ ಅಂಡ್ ಹಿಂದೂಸ್ ಇನ್ ಇಂಡಿಯ (1892) ಎಂಬ ಎರಡು ವಿಚಾರಾತ್ಮಕ ಪ್ರಬಂಧಗಳನ್ನು ಪ್ರಕಟಿಸಿದ. 1898ರ ವರೆಗೆ ಸುಮಾರು ಆರು ವರ್ಷಗಳ ಕಾಲ ಕಿಂಗ್ ಎಡ್ವರ್ಡ್ ಶಾಲೆಯಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ. ಟಾನಿಯವರ ಅನಂತರ ಲಂಡನ್ನಿನ ಇಂಡಿಯ ಕಚೇರಿಯಲ್ಲಿ 1927ರ ವರೆಗೆ ಇಪ್ಪತ್ತೆರಡು ವರ್ಷ ಕಾಲ ಗ್ರಂಥಪಾಲಕನಾಗಿ ದುಡಿದ. ಈ ಅವಧಿಯಲ್ಲಿ ಲಂಡನ್ ವಿಶ್ವವಿದ್ಯಾಲಯದ ತುಲನಾತ್ಮಕ ಭಾಷಾವಿಜ್ಞಾನ ಹಾಗೂ ಟಿಬೆಟಿಯನ್ ಭಾಷಾ ವಿಭಾಗದ ಗೌರವಾಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದ. 1937ರಲ್ಲಿ ಜರುಗಿದ ಪ್ರಾಚ್ಯ ಪರಿಷತ್ತಿಗೆ ಅಧ್ಯಕ್ಷನಾಗಿ, ಕಲ್ಕತ್ತ ವಿಶ್ವವಿದ್ಯಾನಿಲಯದ ಸಂಸ್ಕøತ ಅಧ್ಯಾಪಕನಾಗಿ, ರಾಯಲ್ ಏಷ್ಯಾಟಿಕ್ ಸೊಸೈಟಿಯ ಮುಂಬಯಿ, ಬಿಹಾರ, ಒರಿಸ್ಸ, ಶಾಲೆಗಳ ಪುಣೆಯ ಭಂಡಾರಕರ್ ಸಂಶೋಧನಾಲಯದ ಗೌರವ ಪ್ರತಿನಿಧಿಯಾಗಿ ಕೆಲಸ ಮಾಡಿದ. 

	ಈತ ತನ್ನ ಜೀವಿತದ ಅವಧಿಯಲ್ಲಿ ಸಂಸ್ಕøತ, ಗ್ರೀಕ್, ಜರ್ಮನ್, ಚೀನೀ ಟಿಬೆಟಿಯನ್ ಭಾಷೆಗಳಿಗೆ ಸಂಬಂಧಿಸಿದಂತೆ ಅನೇಕ ಗ್ರಂಥಗಳನ್ನು ಅನುವಾದ ಮಾಡಿ ವಿಮರ್ಶಾತ್ಮಕ ಲೇಖನಗಳನ್ನು ಬರೆದಿದ್ದಾನೆ. ಈತನ ವಿದ್ವಲ್ಲೇಖನಗಳು. ವಿಮರ್ಶೆಗಳು ಮತ್ತು ಅನುವಾದಗಳು ಒಟ್ಟು ಸುಮಾರು ಇನ್ನೂರ ಹದಿನೇಳು. ಭಾಸಕೃತ ಸ್ವಪ್ನದಾಸವದತ್ತ, ದಿಜ್ನಾಗನ ಕುಂದಮಾಲ್ _ ಇವು ಈತ ಸಂಪಾದಿಸಿದ ಕೃತಿಗಳಲ್ಲಿ ಕೆಲವು. 

	ಎ. ಬಿ. ಕೀತ್‍ರವರ ವೇದ ಮತ್ತು ಉಪನಿಷತ್ತುಗಳ ಧರ್ಮ ಹಾಗೂ ತತ್ತ್ವ ಸ್ಟೆನ್ ಕೋನೊ ಸಂಪಾದಿಸಿರುವ ಇಂಡಿಯಾ ಶಾಸನ, ಜಾನ್ ಮಾರ್ಷಲ್ ಸಂಪಾದಿಸಿರುವ ಮೊಹೆಂಜೋದಾರೋ ಮತ್ತು ಸಿಂಧೂ ನಾಗರಿಕತೆ - ಇವುಗಳಿಗೆ ಈತ ವಿಮರ್ಶೆ ಬರೆದಿದ್ದಾನೆ. 

	ಭಾರವಿಯ ಕಿರಾತಾರ್ಜುನೂಯವನ್ನು ಜರ್ಮನ್ ಭಾಷೆಗೆ ಅನುವಾದಿಸಿದುದಲ್ಲದೆ ಕುಮಾರದಾಸನ ಜಾನಕೀಹರಣ, ಬಾಣನ ಹರ್ಷಚರಿತೆ, ಸುಬಂಧುವಿನ ವಾಸವದತ್ತದ ಕಥಾಸಾರ ಹಾಗೂ ವಿಮರ್ಶೆ, ಕಾಳಿದಾಸನ ಮೇಘದೂತ. ಅಶ್ವಘೋಷನ ಸೌಂದರಾನಂದಕಾವ್ಯ- ಇವುಗಳ ಆಂಗ್ಲಾನುವಾದವನ್ನು ಸಿದ್ಧ ಪಡಿಸಿದ್ದಾನೆ. 

	ವ್ಯಾಕರಣದಲ್ಲಿ ವಿಶೇಷ ಪಾಂಡಿತ್ಯ ಗಳಿಸಿದ್ದ ಈತ ಚಂದ್ರವ್ಯಾಕರಣ ವಿಮರ್ಶೆ. ನೆ ಪ್ರತ್ಯಯ ರೂಪಗಳು ಹಾಗೂ ಇತರ ಲೇಖನಗಳನ್ನು ಪ್ರಕಟಿಸಿದ್ದಾನೆ. 

	ಭಾರತೀಯ ಶಾಸನ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಈತನ ಅನೇಕ ಲೇಖನಗಳು ಎಪಿಗ್ರಾಫಿಯ ಇಂಡಿಕದಲ್ಲೂ ರಾಯಲ್ ಏಷ್ಯಾಟಿಕ್ ಸೊಸೈಟಿಯ ನಿಯತ ಕಾಲಿಕದಲ್ಲೂ ಪ್ರಕಟವಾಗಿವೆ. 

	ಭಾಷಾಶಾಸ್ತ್ರದ ಉಪಾಧ್ಯಾಯನಾಗಿದ್ದ ಈತ ಭಾಷಾಶಾಸ್ತ್ರ ಮೇಲೆ ಬೆಳಕು ಬೀರುವಂಥ ಅನೇಕ ಪ್ರಬಂಧಗಳನ್ನೂ ಪ್ರಕಟಿಸಿದ್ದಾನೆ. ಅವುಗಳಲ್ಲಿ ಮುಖ್ಯವಾದವು--ಸಂಸ್ಕøತ ಎಷ್ಟರಮಟ್ಟಿಗೆ ಆಡುಭಾಷೆಯಾಗಿತ್ತು. ಮಧ್ಯ ಏಷ್ಯದ ಎರಡು ಭಾಷೆಗಳು, ಜûನ್-ಜûನ್ ಭಾಷೆ, ನ್ಯಾಮ್ ಭಾಷೆ. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಮಾಕ್ ಡೊನೆಲ್ ರವರ ತರುವಾಯ ಸಂಸ್ಕøತ ಪ್ರಾಧ್ಯಾಪಕನಾಗಿ, ಗುರುವಿಗೆ ತಕ್ಕ ಶಿಷ್ಯನಾಗಿ ಈತ ಸಂಸ್ಕøತಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾನೆ. 

	ಈತನ ವಿದ್ವತ್ತನ್ನು ಗುರುತಿಸಿದ ಮ್ಯೂನಿಕ್ ವಿಶ್ವವಿದ್ಯಾಲಯ ಈತನಿಗೆ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಗೌರವಿಸಿತು. ಭಾರತಧರ್ಮ ಮಹಾ ಮಂಡಲ ವಿದ್ಯಾವಾರಿಧಿಯೆಂಬ ಅತ್ಯುನ್ನತ ಪ್ರಶಸ್ತಿಯನ್ನೂ ಕಲ್ಕತ್ತಾ ಸಂಸ್ಕøತ ಕಾಲೇಜು ಜ್ಞಾನಬಂಧು ಪ್ರಶಸ್ತಿಯನ್ನೂ ನೀಡಿದವು. 1934 ರಲ್ಲಿ ಟೋಕಿಯೋನಲ್ಲಿ ನಡೆದ ಬೌದ್ಧ ಮಹಾ ಸಮ್ಮೇಳನದಲ್ಲಿ ಈತ ಬೌದ್ಧ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆಗಾಗಿ ಸುವರ್ಣ ಪದಕ ನೀಡಿತು. 	       							 (ಎಚ್.ಪಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ